ರಂಗಾ, ಬಿ ಎಸ್
1918 -. ಕನ್ನಡದ ಪ್ರಥಮ ವರ್ಣಚಿತ್ರ ನಿರ್ಮಾಪಕ. ನಿರ್ದೇಶಕರು ಛಾಯಾಗ್ರಾಹಕರು, ಸ್ಟುಡಿಯೋ ಮಾಲಿಕರು. ಹುಟ್ಟಿದ್ದು ಬೆಂಗಳೂರಿನಲ್ಲಿ, ತಂದೆ ಬಿ. ಎಸ್. ಐಯ್ಯಂಗಾರ್, ಮುದ್ರಣ ತಜ್ಞರು, ಮುದ್ರಣಾಲಯದ ಮಾಲಿಕರು. ರಂಗಭೂಮಿಯ ಬಗ್ಗೆ ಒಲವು ಬೆಳೆಸಿಕೊಂಡದ್ದು ತಮ್ಮ ತಂದೆಯವರ ಮೂಲಕ. ಛಾಯಾಗ್ರಹಣದಲ್ಲಿಯೂ ಆಸಕ್ತಿ ಹೊಂದಿದ್ದ ಇವರು ಹೆಚ್ಚಿನ ಕಲಿಕೆಗಾಗಿ 1940ರ ಸುಮಾರಿಗೆ ಮುಂಬಯಿಗೆ ಹೋಗಿ ಅಲ್ಲಿ ರಣಜಿತ್ ಸ್ಟುಡಿಯೋ ಸೇರಿ ಆ ಸಂಸ್ಥೆಯಲ್ಲಿ ತಯಾರಾದ ಅಛೂತ್, ತುಲಸೀದಾಸ್, ಹೋಲಿ, ಪಾಗಲ್, ಪರದೇಶಿ ಮೊದಲಾದ ಚಿತ್ರಗಳಲ್ಲಿ ಸಹಾಯಕರಾಗಿ ದುಡಿದರು. ಅನಂತರ ಮದರಾಸಿನ ಜೆಮಿನಿ ಸ್ಟುಡಿಯೋದಲ್ಲಿ ಛಾಯಾಗ್ರಹಣ ನಿರ್ದೇಶಕರಾದರು. ಆ ಸಂಸ್ಥೆಯಿಂದ ಹೊರಬಂದ ನಾರದರ್ ನಂದನಾರ್, ಬಾಲನಾಗಮ್ಮ, ದಾಸಿ, ಅಪರಂಜಿ, ಚಿತ್ರಗಳ ಛಾಯಾಗ್ರಾಹಕರಾಗಿ ದುಡಿದರು. ಅನಂತರ ತಮಿಳರೊಬ್ಬರ ಜೊತೆಗೂಡಿ ಭಕ್ತ ತುಲಸೀದಾಸ್ ಎಂಬ ಸ್ವಂತ ಚಿತ್ರವನ್ನು ಮುಂಬಯಿಯಲ್ಲಿ ತಯಾರಿಸಿದರು. ಆದರೆ ಆ ಚಿತ್ರ ಯಶಸ್ವಿಯಾಗಲಿಲ್ಲ. ಅನಂತರ ಭರಣಿ ಸಂಸ್ಥೆಯ ಲೈಲಾಮಜ್ನು ಚಿತ್ರಕ್ಕೆ ನೀಡಿದ ಛಾಯಾಗ್ರಹಣದಿಂದ ಪ್ರಸಿದ್ಧಿಗೆ ಬಂದರು. ಸ್ತ್ರೀಸಾಹಸಂ, ಶಾಂತಿ, ದೇವದಾಸು, ಮನಂಪೋಲ್ ಮಾಂಗಲ್ಯಂ, ಕಣವನ್ ಕಣ್ಕಂಡ ದೈವಂ, ಮೊದಟಿ ರಾತ್ರಿ, ದೀಕ್ಷ ಮೊದಲಾದ ಹಲವಾರು ತಮಿಳು ತೆಲುಗು ಚಿತ್ರಗಳ ಛಾಯಾಗ್ರಾಹಕರಾಗಿ ಹೆಸರುಗಳಿಸಿದರು. ಅತ್ಯಂತ ಜನಪ್ರಿಯ ಚಿತ್ರ ದೇವದಾಸು ಇವರು ಚಿತ್ರೀಕರಿಸಿದ ಪ್ರಮುಖ ಚಿತ್ರ. 

ಬಿ.ಎಸ್.ರಂಗ ಮತ್ತು ಕರ್ನಾಟಕದ ಚಿತ್ರೋದ್ಯಮಗಳಿಗೆ ಒಗ್ಗೂಡಿ ಬೆಂಗಳೂರಿನ ಬಳಿ ವಿಕ್ರಂ ಲ್ಯಾಬೊರೇಟರಿ ಸ್ಥಾಪಿಸಿದರು. ದಕಿಣ ಭಾರತದ ಮೊದಲ ಅಟೊಮ್ಯಾಟಿಕ್ ಲ್ಯಾಬೊರೇಟರಿ. ವಿಕ್ರಂ ಲ್ಯಾಬೊರೇಟರಿ ಸಂಸ್ಥೆಯನ್ನು 1950ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಿದರು. ಸುಸಜ್ಜಿತ ಚಿತ್ರಸಂಸ್ಕರಣ ಸಂಸ್ಥೆಗಳು ಆ ಕಾಲಕ್ಕೆ ಮದರಾಸಿನಲ್ಲೆ ಹೆಚ್ಚಾಗಿದ್ದು, ಕರ್ನಾಟಕದಲ್ಲಿ ಇವರಿಗೆ ಪ್ರೋತ್ಸಾಹ ದೊರೆಯದೆ ಹೋದುದರಿಂದ ಇದು ಮದರಾಸಿಗೆ ವರ್ಗಾವಣೆಯಾಯಿತು. ಈ ಲ್ಯಾಬೊರೇಟರಿಗೆ ಪೂರಕವಾಗಿ ವಿಕ್ರಂ ಪ್ರೊಡಕ್ಷನ್ಸ್ ಸಂಸ್ಥೆ 1952ರಲ್ಲಿ ಸ್ಥಾಪಿನೆಯಾಯಿತು. ಮಾ ಗೋಪಿ ಎಂಬ ತೆಲುಗು ಚಿತ್ರ ಈ ಸಂಸ್ಥೆಯ ಮೊದಲ ಚಿತ್ರ. 1955ರಲ್ಲಿ ಇವರದೇ ಆದ ವಿಕ್ರಂ ಸ್ಟುಡಿಯೋ ಸ್ಥಾಪನೆಯಾಯಿತು. ಸ್ಟುಡಿಯೋ ಲ್ಯಾಬೊರೇಟರಿ. ನಿರ್ಮಾಣ ನಿರ್ದೇಶನ. ಛಾಯಾಗ್ರಹಣ ಎಲ್ಲವೂ ಅವರದೇ ಆಗಿತ್ತು. ಕನ್ನಡ. ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿಯೂ ಇವರು ಚಿತ್ರಗಳನ್ನು ತಯಾರಿಸಿದ್ದಾರೆ. ಉದಾ: ಭಕ್ತ ಮಾರ್ಕಂಡೇಯ (1956). ನಿಶ್ಚಯ ತಾಂಬೂಲು. ಪಟ್ಟಿಕಟ್ಟು ಪೊನ್ನಯ್ಯ. ತೆನ್ರಲ್ ವೀಸುಂ ಇವು ತಮಿಳು. ಚಿತ್ರಗಳು. ವಸಂತಸೇನ ತೆಲುಗು ಚಿತ್ರ. ಭಾಯಿ ಬೆಹನ್ ಹಿಂದಿ ಚಿತ್ರ. ಮಹಿಷಾಸುರಮರ್ದಿನಿ (1959), ಪ್ರತಿಜ್ಞೆ (1964) ಮಹಾಸತಿ ಅನಸೂಯ (1965) ಚಂದ್ರಹಾಸ (1965), ಪಾರ್ವತಿ ಕಲ್ಯಾಣ (1967), ಇವು ಕನ್ನಡ ಚಿತ್ರಗಳು. ಕನ್ನಡದ ಪ್ರಪ್ರಥಮ ವರ್ಣಚಿತ್ರವಾದ 'ಅಮರಶಿಲ್ಪಿ ಜಕಣಾಚಾರಿ'ಯನ್ನು (1964) ನಿರ್ಮಿಸಿದ ಕೀರ್ತಿ ಇವರದು. ಇದಾದ ಅನಂತರ ಭಲೇಬಸವ (1969) ಹಾಗು ಮಿಸ್ಟರ್ ರಾಜಕುಮಾರ್ (1970) ಎಂಬ ಇನ್ನೆರಡು ವರ್ಣಚಿತ್ರಗಳು ಇವರ ತಯಾರಿಕೆಯೇ, ಇವರ ನಿರ್ಮಾಣದ ಸಿಡಿಲುಮರಿ (1971) ಹಾಗೂ ಮಣ್ಣಿನ ಮಗಳು (1974) ಅಷ್ಟಾಗಿ ಯಶಸ್ಸು ಕಾಣಲಿಲ್ಲ. ಚಿತ್ರಜೀವನದಕೊನೆಯ ಘಟ್ಟಗಳಲ್ಲಿ ಆರ್ಥಿಕ ನಷ್ಟ ಅನುಭವಿಸಿದ ಮೇಲೆ ಇವರ ಚಿತ್ರರಂಗ ಚಟುವಟಿಕೆ ಸ್ವಲ್ಪಕಾಲ ಸ್ಥಗಿತಗೊಂಡಿತ್ತು. ಇತ್ತೀಚಿಗೆ ಕರ್ನಾಟಕ ಫಿಲಂ ಡೆವಲಪ್‍ಮೆಂಟ್ ಕಾರ್ಪೊರೇಷನ್‍ನ ಸಹಾಯದಿಂದ ಸುಳಿ ಎಂಬ ಕನ್ನಡ ಚಿತ್ರವನ್ನು ನಿರ್ಮಿಸಿದರು. ಕರ್ನಾಟಕ ಸರಕಾರ ರಂಗಾ ಅವರಿಗೆ 1988-89ನೇ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಿ ಗೌರವಿಸಿದೆ. ರಂಗಾ ಅವರ ಹಿರಿಯ ಸೋದರರಾದ ಬಿ.ಎಸ್. ಗರುಡಾಚಾರ್, ವಿಕ್ರಂಪಿಕ್ಚರ್ಸ್ ಲಾಂಛನದಲ್ಲಿ ಚಿತ್ರ ವಿತರಕರಾಗಿದ್ದರು. ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ